YELBURGA : ಭಾವೈಕ್ಯದ ಈದ್ ಉಲ್ ಫಿತ್ರ ಸಡಗರ ಸಂಭ್ರಮದಿಂದ ಆಚರಣೆ

ಯಲಬುರ್ಗಾ ಪಟ್ಟಣದಲ್ಲಿ  ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ  ಸಾಮೂಹಿಕ ಪ್ರಾರ್ಥನೆ 

ಯಲಬುರ್ಗಾ : ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ ಮಾಡಿದರು.
ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಎಲ್ಲರು ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು. ಚಿಕ್ಕಮಕ್ಕಳು ಕೂಡ ಭಾಗವಹಿಸಿರುವುದು ವಿಶೇಷವಾಗಿ ಕಂಡು ಬಂದಿತು.
ಶ್ವೇತವಸ್ತ್ರ ಧರಿಸಿ ಗುಂಪು ಗುಂಪಾಗಿ ಖಬರ್‌ಸ್ಥಾನ ಹಾಗೂ ಮಸೀದಿಗಳತ್ತ ಬಂದ ಮುಸ್ಲಿಮ ಬಾಂದವರು ಮೊದಲು ಸಿಹಿ ಹಂಚಿ,ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಹೊಸ ಬಟ್ಟೆಗಳಲ್ಲಿ, ಸಾಂಪ್ರದಾಯಿಕ ಪೋಷಾಕುಗಳಲ್ಲಿ ಕಂಗೊಳಿಸುತ್ತಿದ್ದ ಮಕ್ಕಳು ಹಬ್ಬದ ಸಂಭ್ರಮ ಹೆಚ್ಚಿಸಿದರು. 
ಮುಸ್ಲಿಂ ಧರ್ಮ ಗುರುಗಳಾದ ಹಜರತೆ ಸೈಯ್ಯದ್ ಖಾಜಿ ಮೊಹಮ್ಮದ್ ಅಬ್ದುಲ್ ಖಾದರ್ ಖಾದ್ರಿ ಮುಷಾಹಿದುಲ್ಲಾ ಹಫೀ ಅನಹು  ಹಬ್ಬದ ಸಂದೇಶ ಸಾರಿ, ಮಾನವನನ್ನು ಕೆಡುಕಿನಿಂದ ಒಳಿತಿನೆಡೆಗೆ ಆಹ್ವಾನಿಸುವುದೇ ಪವಿತ್ರ ಕುರಾನ್ ಸಂದೇಶ. ವಿಶ್ವ ಸಮುದಾಯಕ್ಕೆ ಶಾಂತಿ, ಸ್ನೇಹ ಮತ್ತು ಸೌಹರ್ದತೆಯ ಸಂದೇಶವನ್ನು ಸಾರುವ ಈದುಲ್ ಪಿತ್ ಹಬ್ಬವನ್ನು ಮುಸ್ಲಿಂ ಬಾಂಧವರು  ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸುವ ಪವಿತ್ರವಾದ ಹಬ್ಬ.ರಂಜಾನ್ ಹಬ್ಬದಲ್ಲಿ ರಾಮ ಮತ್ತು ರಹೀಮ ಒಂದಾಗಿ ಶುಭಾಶಯ ಹಂಚಿಕೊಳ್ಳುವ ಹಾಗೂ ರೆಹಮಾನ್ ಮತ್ತು ರಾಬರ್ಚ್ ಸೇರಿ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸದ್ಭಾವನೆಯ ಸಂತಸವನ್ನು ಕಾಣಬಹುದು.
ಇಮಾನ್, ನಮಾಜ್, ರೋಜಾ, ಜಕಾತ್ ಹಾಗೂ ಹಜ್ ಎಂಬ ಇಸ್ಲಾಂ ಧರ್ಮದ ಪ್ರಮುಖ ಪಂಚತತ್ವಗಳ ಮಹತ್ವ ಹಾಗೂ  ಆಚರಣೆಯಿಂದಾಗುವ ಪ್ರಯೋಜನ ಕುರಿತು ಜನರಲ್ಲಿ ಹೆಚ್ಚು ಅರಿವು ಮೂಡಿಸುವಂಥ ವಿಶೇಷ ಸಂದರ್ಭ ರಂಜಾನ್ ಹಬ್ಬದ್ದಾಗಿದೆ. ಈ ಸಮಾಜದ ಪಾವಿತ್ರ್ಯತೆಯನ್ನು ಕಾಪಾಡಲು ಸೂಕ್ತ ವ್ಯಕ್ತಿತ್ವವನ್ನು, ವ್ಯಕ್ತಿಗಳನ್ನು ನಿರ್ಮಿಸಲು ರಂಜಾನ್ ಎಂಬ ಈ ಪವಿತ್ರ ತಿಂಗಳನ್ನು ಆಯ್ಕೆ ಮಾಡಿ ಕೊಳ್ಳಲಾಗಿದೆ.ಇದೊಂದು ರೀತಿ ಪಾಪ ಕಳೆದು ಪುಣ್ಯ ಗಳಿಸಲು ಇರುವ ಮಹತ್ವದ ದಿನ ಎನ್ನಬಹುದು. ಉಳ್ಳವರು ಇಲ್ಲದವರಿಗೆ ಅನ್ನ ,ಬಟ್ಟೆ ಹಾಗೂ ಹಣವನ್ನು ನೀಡುವ ಮೂಲಕ ಉದಾರತೆ ತೋರಬೇಕು.ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು ಕೈಗೊಳ್ಳುವ ಉಪವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ.ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಅನಾಥರು ಹಾಗೂ ಬಡವರಿಗೆ ಆಹಾರ, ವಸ್ತ್ರಗಳನ್ನು ಕೊಡುಗೆ ನೀಡಿದರು. ಧಾರ್ಮಿಕ ಮುಖಂಡರು, ಜಾಮಿಯಾ ಮಸೀದಿ ಪದಾಧಿಕಾರಿಗಳು, ಪಟ್ಟಣದ ಮುಸ್ಲಿಂ ಬಾಂಧವರು  ಇದ್ದರು.
ಮಕ್ಕಳು,ಮಹಿಳೆಯರು ಮೆಹಂದಿ ಹಾಕಿಕೊಂಡು ,ಹೊಸ ಬಟ್ಟೆ ತೊಟ್ಟುಕೊಂಡು ಸಂಭ್ರಮಿಸಿದರಲ್ಲದೆ ವಿಶೇಷ ಹಬ್ಬದೂಟ ಸವಿಯುವ ಮೂಲಕ ಕಳೆದ ಒಂದು ತಿಂಗಳ ಉಪವಾಸ ವ್ರತ ಕೊನೆಗೊಳಿಸಿದರು.
ಪಟ್ಟಣದ ಮುಸ್ಲಿಂ ಬಾಂಧವರು ತಮ್ಮ ಹಿಂದೂ ಬಾಂಧವರಿಗೆ, ಮನೆಗೆ ಕರೆದು ರಂಜಾನ್ ಹಬ್ಬದ ಪ್ರೀತಿಯ ಭೋಜನ ಉಣಬಡಿಸುತ್ತಿರುವುದು ವಿಶೇಷವಾಗಿತ್ತು. ಅದರಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿಯೂ ಮುಸ್ಲಿಂ ಬಾಂಧವರು ಹಿಂದೂಗಳಿಗೆ ತಮ್ಮ ಮನೆಗೆ ಭೋಜನಕ್ಕೆ ಕರೆದು ಸುರುಕುಂಬಾ ಎನ್ನುವ ವಿಶೇಷ ಸಿಹಿ ಭೋಜನ ಉಣಬಡಿಸಿದರು.

                  ನಿರ್ಭಯ ನ್ಯೂಸ್ ಕನ್ನಡ 
                      "ಇದು ಪ್ರಜಾ ಧ್ವನಿ"

Post a Comment

Previous Post Next Post

FLASH

Contact for News and Ads on Nirbhaya News Kannada : 9060723440