ಯಲಬುರ್ಗಾ
ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀರಾಮ ಮಂದಿರ ಉದ್ಘಾಟನೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂದಿದ್ದ ಮಂತ್ರಾಕ್ಷತೆಯನ್ನು ಯಲಬುರ್ಗಾ ಪಟ್ಟಣದ ವಿವಿಧ ವಾರ್ಡಗಳಲ್ಲಿ ಸೋಮವಾರ ಹಿಂದೂ ಪರ ಸಂಘಟನೆ, ಆರ್ ಎಸ್ ಎಸ್ ಸಂಘಟನೆ ಹಾಗೂ ರಾಮಭಕ್ತರು ಪ್ರತಿ ಮನೆ ಮನೆಗೆ ತೆರಳಿ ಶ್ರದ್ಧೆ, ಭಕ್ತಿಯಿಂದ ವಿತರಿಸಿ ಭಕ್ತಿ ಭಾವ ಮೆರೆದರು.
ಪಟ್ಟಣದ ಮುದಿ ಹನುಮಪ್ಪ ದೇವರ ಮಂದಿರದಲ್ಲಿ ಪೂಜೆ ಸಲ್ಲಿಸಿ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜೈ ಶ್ರೀ ರಾಮ ಘೋಷಣೆ ಕೂಗುತ್ತ ರಾಮನ ಭಾವಚಿತ್ರ ಹಾಗೂ ಶ್ರೀರಾಮ ಮಂದಿರ ಕುರಿತ ವಿವರಣೆ ಉಳ್ಳ ಕರಪತ್ರ ಹಂಚಿಕೆ ಮಾಡಿದರು.
ರಾಮ ಭಕ್ತ ಸುರೇಶಗೌಡ ಶಿವನಗೌಡರು ಮಾತನಾಡಿ ಈ ತಿಂಗಳ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಇಡೀ ದೇಶ ಸಂತೋಷ ಪಡುವ ವಿಷಯವಾಗಿದೆ. ಯಾವುದೇ ರಾಜಕೀಯ ವಿಷಯ ಇಲ್ಲಿ ಬರುವುದಿಲ್ಲ,ಪಕ್ಷ ಬೇಧ ಮರೆತು ಭಾರತೀಯರಾದವರು ಸಂಭ್ರಮಪಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ ಎಸ್ ಎಸ್ ಮುಖಂಡ ಅಂದಪ್ಪ ನರೇಗಲ್ ಮಾತನಾಡಿ ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರು ಕೂಡ ಹಣ ವಸ್ತು ಸ್ವೀಕರಿಸಬಾರದು ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠ ದಿನದಂದು ಪ್ರತಿಯೊಬ್ಬರು ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಕುಟುಂಬದ ಸದಸ್ಯರೆಲ್ಲರು ಒಟ್ಟಾಗಿ ಸೇರಿ ಕನಿಷ್ಠ ಐದು ದೀಪಗಳನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಹಚ್ಚಬೇಕು. ಅಲ್ಲದೆ ಭಕ್ತರು ತಮ್ಮ ಸುತ್ತಮುತ್ತಲಿನಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕೆಂದು ಅವರು ಹೇಳಿದರು.
ರಾಮ ಭಕ್ತ ಸುನಿಲ್ ಕುಲಕರ್ಣಿ ಮಾತನಾಡಿ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷ ಪೂಜೆ, ಹವನ, ಸತ್ಸಂಗ, ಭಜನೆ ಮುಂತಾದ ಕಾರ್ಯಕ್ರಮ ನಡೆಯಲಿದೆ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ಕೂಡ ಆಯಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಪಟ್ಟಣದ ಹಿಂದೂಪರ ಸಂಘಟನೆಗಳ ಮುಖಂಡರುಗಳು,ಆರ್ ಎಸ್ ಎಸ್ ಮುಖಂಡರುಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ರಾಮಭಕ್ತರು ಪಾಲ್ಗೊಂಡಿದ್ದರು.
Post a Comment